fbpx
ಸಮಾಚಾರ

ಕನ್ನಡ ಹೋರಾಟಗಾರರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುವವರಿಗೆ ಸಂಸದ ಜಿಸಿ ಚಂದ್ರಶೇಖರ್ ಕ್ಲಾಸ್!

ಕನ್ನಡ ಪರ ಹೋರಾಟಗಾರರ ಬಗ್ಗೆ ಅತೀ ಕೀಳು ಮಟ್ಟದಲ್ಲಿ ಮಾತನಾಡುತ್ತಿರುವ ಗಣ್ಯ ವ್ಯಕ್ತಿಗಳಿಗೆ ರಾಜ್ಯ ಸಭಾ ಸಂಸದ ಜಿಸಿ ಚಂದ್ರಶೇಖರ್ ಅವರು ತಿರುಗೇಟು ನೀಡಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು ” ಕನ್ನಡ ಪರ ಹೋರಾಟಗಾರರ ಬಗ್ಗೆ ಮಾತನಾಡುವಾಗ ಸ್ವಲ್ಪ ವಿವೇಚನೆ ಇಟ್ಟುಕೊಂಡು ಮಾತನಾಡಬೇಕು” ಎಂದು ಹೇಳಿದ್ದಾರೆ.

“ಕನ್ನಡ ಪರ ಹೋರಾಟಗಾರರ ಬಗ್ಗೆ ಮಾತನಾಡುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವವರು ತುಂಬಾ ಆಲೋಚನೆ ಮಾಡಿ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತೆ. ಯಾಕೆಂದರೆ ಕರ್ನಾಟಕ ರಾಜ್ಯ ಹೇಗೆ ಉದಯವಾಯಿತು ಎಂಬುದನ್ನು ಹಿಂತಿರುಗಿ ನೋಡಿದರೆ, ೧೯೫೬ರಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆಯಾಗಿ ಮೈಸೂರು ಹೆಸರಿನಲ್ಲಿ ರಾಜ್ಯ ಹುಟ್ಟುತ್ತದೆ. ಅಂದಿನಿಂದ ಇಲ್ಲಿಯವರೆಗೂ ರಾಮಮೂರ್ತಿ, ಆಲೂರು ವೆಂಕಟರಾಯರು, ಕುವೆಂಪು, ರಾಜಕುಮಾರ್ ಹೀಗೆ ಕನ್ನಡಕ್ಕಾಗಿ ಹೋರಾಟ ಮಾಡಿಕೊಂಡು ಬಂದಿರುವ ಗಣ್ಯರ ಕೊಡುಗೆಯಲ್ಲಿ ಕನ್ನಡ ಪರ ಸಂಘಟನೆಗಳ ಪಾತ್ರ ಬಹಳ ದೊಡ್ಡದಿದೆ.”

“ನಮ್ಮ ಭಾರತ ದೇಶ ಇರುವುದು ಒಕ್ಕೂಟ ವ್ಯವಸ್ಥೆಯ ದೇಶ, ಈ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯಗಳು ಬಲಿಷ್ಠವಾಗಬೇಕು, ಆ ರಾಜ್ಯದ ಸಂಸ್ಕೃತಿ ಬಲಿಷ್ಠವಾಗಬೇಕು. ಸಂಸ್ಕೃತಿ ಬಲಿಷ್ಠ ಆಗಬೇಕು ಅಂದರೆ ಆಯಾ ರಾಜ್ಯಗಳ ಭಾಷೆಗಳು ಪ್ರಮುಖವಾಗುತ್ತದೆ. 80ರ ದಶಕದಲ್ಲಿ ಕನ್ನಡ ಪರ ಸಂಘಟನೆಗಳು ಎಂಥಾ ದೊಡ್ಡ ಹೋರಾಟ ಮಾಡಿವೆ ಎಂಬುದನ್ನು ನೆನಪಿಸಬೇಕು ಎಂದರೆ, ರಾಜಕುಮಾರ್ ಅವರ ನಾಯಕತ್ವದಲ್ಲಿ ನಡೆದ ಗೋಕಾಕ್ ಚಳುವಳಿ ಒಂದು ಉದಾಹರಣೆ. ಸಾಹಿತ್ಯ ಲೋಕ, ಸಿನಿಮಾ ನಂತರ ಜೊತೆಗೂಡಿ ಕನ್ನಡ ಪರ ಹೋರಾಟಗಾರರು ಗೋಕಾಕ್ ಚಳುವಳಿ ಮಾಡಿದ್ದರಿಂದ ಗೋಕಾಕ್ ವರದಿ ಜಾರಿಗೆ ಬರಲು ಅನುಕೂಲ ಆಯಿತು.”

” ಕನ್ನಡ ಚಳುವಳಿಗಾರ ಒಗ್ಗಟ್ಟಿನಿಂದಲೇ ಇಂದು ನಮ್ಮ ಸಂಸ್ಕೃತಿ ಬಲಿಷ್ಠವಾಗಿ ನಿಂತಿದೆ ಎಂದು ಹೇಳಿದರೇ ತಪ್ಪಾಗುವುದಿಲ್ಲ. ಹಾಗಾಗಿ ಇನ್ನು ಮುಂದೆ ಯಾದರೂ ಕನ್ನಡ ಪರ ಹೋರಾಟಗಾರರ ಬಗ್ಗೆ ಮಾತನಾಡುವಾಗ ವಿವೇಚನೆಯಿಂದ ಮಾತನಾಡಿ ಕನ್ನಡಿಗರನ್ನು ಮತ್ತು ಕನ್ನಡಕ್ಕಾಗಿ ಹೋರಾಟ ಮಾಡುವವರನ್ನು ಪ್ರೋತ್ಸಾಹಿಸೋಣ. ಯಾರೂ ಅನ್ಯತಾ ಭಾವಿಸದೆ ಮಾಧ್ಯಮಗಳಲ್ಲಿ ಮಾತನಾಡುವಾಗಲಿ, ಅಥವಾ ಹೊರಗಡೆ ಮಾತನಾಡುವಾಗಲಿ ಯಾರೂ ಕೂಡ ಕನ್ನಡ ಹೋರಾಟಗಾರರ ಬಗ್ಗೆ ಹಾಗುವಾಗಿ ಮಾತನಾಡಬೇಡಿ. ಹೀಗೆ ಮಾತನಾಡಿದರೆ ಬೇರೆ ರಾಜ್ಯದವರಿಗೆ ನಮ್ಮ ದೌರ್ಬಲ್ಯವನ್ನು ತೋರಿಸಿದಂತೆ ಆಗುತ್ತದೆ” ಎಂದು ಜಿಸಿ ಚಂದ್ರಶೇಖರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top