fbpx
ಸಮಾಚಾರ

ಕೊನೆಗೂ ಪತ್ತೆಯಾದ ‘ಪಕ್ಕೆಲುಬು’ ಶಿಕ್ಷಕ: ಸೇವೆಯಿಂದ ಅಮಾನತು!

ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಕ್ಕೆಲುಬು ಎಂಬ ಪದವನ್ನು ಉಚ್ಚರಿಸಲು ಸಾಧ್ಯವಾಗದೆ ಕಷ್ಟಪಡುವ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಶಿಕ್ಷಕನನ್ನು ಶಿಕ್ಷಣ ಇಲಾಖೆ ಕೊನೆಗೂ ಪತ್ತೆಹಚ್ಚಿದ್ದು, ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಿದೆ.

ಶಾಲಾ ಬಾಲಕನೋರ್ವ ತೊದಲು ತೊದಲಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ ಚಂದ್ರಶೇಖರಪ್ಪಾ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದರು. ಹೀಗಾಗಿ ಶಿಕ್ಷಕನನ್ನು ತಾಲೂಕಿನ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.

ಏನಿದು ಪಕ್ಕೆಲುಬು ವಿವಾದ:
ಶಿಕ್ಷಕನೋರ್ವ ಶಾಲೆಯಲ್ಲಿ ನಲಿ-ಕಲಿ ಪಾಠ ಬೋಧಿಸುವಾಗ ಬಾಲಕನನ್ನು ತರಗತಿಯಲ್ಲಿ ಕೂರಿಸಿಕೊಂಡು ಪಕ್ಕೆಲುಬು ಪದವನ್ನು ಉಚ್ಛಾರ ಮಾಡುವಂತೆ ಹೇಳಿದ್ದರು. ಆದರೆ ಆ ಬಾಲಕ ಎಷ್ಟೇ ಪ್ರಯತ್ನಿಸಿದರೂ ಪಕ್ಕೆಲುಬು ಪದವನ್ನು ಉಚ್ಚಾರ ಮಾಡಲು ಸಾಧ್ಯವಾಗಿರಲಿಲ್ಲ. ಕೆಲವು ಬಾರಿ ತಾಳ್ಮೆ ಕಳೆದುಕೊಂಡ ಶಿಕ್ಷಕ ವಿದ್ಯಾರ್ಥಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ ಬಾಲಕನನ್ನು ಬೆದರಿಸಿ ಪಕ್ಕೆಲುಬು ಪದ ಉಚ್ಚಾರಣೆ ಮಾಡುವಂತೆ ಬಲವಂತ ಮಾಡಿದ್ದರು.

ಆದರೆ, ಮೊದಲೇ ಹೆದರಿದ್ದ ವಿದ್ಯಾರ್ಥಿ ಅಳುತ್ತಾ, ಪಕ್ಕೆಲುಬು ಪದವನ್ನು ತಪ್ಪಾಗಿ ಉಚ್ಚಾರಣೆ ಮಾಡಿದ್ದ. ವಿದ್ಯಾರ್ಥಿಯು ಕಷ್ಟಪಡುತ್ತಿರುವ ವಿಡಿಯೋ ಹಾಸ್ಯಾಸ್ಪದವಾಗಿ ವೈರಲ್ ಆಗಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡಿದ್ದ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವಿಡಿಯೋ ಹರಿಯಬಿಟ್ಟಿದ್ದ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಸದ್ಯ ಈ ವಿಡಿಯೋ ಮಾಡಿರುವುದು ಶಿಕ್ಷಕ ಟಿ.ಚಂದ್ರಶೇಖರ್​ ಎಂಬುದು ಖಚಿತವಾಗಿದ್ದು, ಅವರನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top