fbpx
ಸಮಾಚಾರ

ಬೆಂಗಳೂರು ಏರ್ಪೋರ್ಟ್‌ ಬಳಿ 80 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ 80 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮತ್ತು ಥೀಮ್‌ ಪಾರ್ಕ್ ನಿರ್ಮಾಣ ಸಂಬಂಧ ಶೀಘ್ರದಲ್ಲಿಯೇ ಅಂತಿಮ ರೂಪರೇಷೆ ಸಿದ್ಧಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ಬುಧವಾರ ನಡೆಸಿದರು. ಸಭೆಯ ಬಳಿಕ ಮಾತನಾಡಿ, ” ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಜಾಗ ನಿಗದಿ ಮಾಡಲಾಗಿದೆ” ಎಂದರು. “80 ಅಡಿ ಎತ್ತರದ ಪ್ರತಿಮೆಯ ವಿನ್ಯಾಸ, ಪರಿಕಲ್ಪನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. 23 ಎಕರೆ ಜಾಗದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಕೂಡಾ ಉದ್ದೇಶಿಸಲಾಗಿದೆ” ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

“ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭುವಿನ 80 ಅಡಿ ಎತ್ತರದ ಪ್ರತಿಮೆ ಹಾಗೂ ಕೆಂಪೇಗೌಡರು ಅಂದು ಅಭಿವೃದ್ಧಿಪಡಿಸಿದ್ದ 46 ತಾಣಗಳ ಉಳಿಸಿ ಅವುಗಳ ಪುನರುಜ್ಜೀವನ ಮಾಡುವ ಸಂಬಂಧ ವಿಸ್ತೃತ ಚರ್ಚೆ ನಡೆಯಿತು.

ಈ ಎಲ್ಲ 46 ತಾಣಗಳಿಗೆ ಜನ ಭೇಟಿ ಕೊಟ್ಟು, ಅದರ ಮಹತ್ವ ಅರಿಯುವ ಜತೆಗೆ ಈ ನಾಡಿಗೆ ಕೆಂಪೇಗೌಡರ ಕೊಡುಗೆಗಳ ಬಗ್ಗೆಯೂ ತಿಳಿಯಬೇಕು ಎಂಬುದು ನಮ್ಮ ಸರ್ಕಾರದ ಆಶಯ,” ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು. ಥೀಮ್‌ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟಅಧಿಕಾರಿಗಳು, ಐಡೆಕ್‌ ಸಂಸ್ಥೆಯವರ ಜತೆ ಚರ್ಚೆ ನಡೆಸಲಾಗಿದೆ. ಯೋಜನೆಗಳ ರೂಪರೇಷೆ ಬಗ್ಗೆ ಚರ್ಚಿಸಲಾಗಿದೆ. ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ವಿವರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top