fbpx
ಸಮಾಚಾರ

ಕೊನೆಗೂ ಕರ್ನಾಟಕಕ್ಕೆ 2ನೇ ಹಂತದ ಪ್ರವಾಹ‌ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ!

ನೆರೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮತ್ತೆ 1,869.85 ಕೋಟಿ ಪರಿಹಾರ ಘೋಷಣೆ ಮಾಡಿದೆ. ಕರ್ನಾಟಕ ಸೇರಿದಂತೆ ಪ್ರವಾಹಕ್ಕೆ ಈಡಾಗಿರುವ ಏಳು ರಾಜ್ಯಗಳಿಗೆ ಒಟ್ಟು 5,908 ಕೋಟಿ ಹಣ ಘೋಷಿಸಿದೆ.

ಮಧ್ಯಪ್ರದೇಶಕ್ಕೆ 1749.73 ಕೋಟಿ ರೂ., ಮಹಾರಾಷ್ಟ್ರ 956.93 ಕೋಟಿ ರೂ., ಅಸ್ಸಾಂಗೆ 616.63 ಕೋಟಿ ರೂ, ಹಿಮಾಚಲ ಪ್ರದೇಶಕ್ಕೆ 284.93 ಕೋಟಿ ರೂ, ತ್ರಿಪುರಾಕ್ಕೆ 63.32 ಕೋಟಿ ರೂ ಮತ್ತು ಉತ್ತರ ಪ್ರದೇಶಕ್ಕೆ 367.17 ಕೋಟಿ ರೂ. ಪ್ರವಾಹ ಪರಿಹಾರ ನಿಧಿಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ [1869.85 ಕೋಟಿ ರೂ] ಸಿಂಹಪಾಲು ಸಿಕ್ಕಿದೆ.

ಕೇಂದ್ರದ ಮೋದಿ ಸರ್ಕಾರ ಕರ್ನಾಟಕವನ್ನು ಕಡೆಗಣಿಸುತ್ತಿದೆ, ಯಡಿಯೂರಪ್ಪ ಅವರ ಮಾತಿಗೆ ಮೋದಿ, ಶಾ ಅವರ ಬಳಿ ಗೌರವವಿಲ್ಲ ಎಂದೆಲ್ಲಾ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದವು. ಅಲ್ಲದೆ ಇತೇ ನಾಲ್ಕು ದಿನಗಳ ಹಿಂದೆ ತುಮಕೂರು-ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇದಿಕೆಯಲ್ಲೇ ಯಡಿಯೂರಪ್ಪ ರಾಜ್ಯವು ಸಂಕಷ್ಟದಲ್ಲಿದ್ದು ಐವತ್ತು ಸಾವಿರ ಕೋಟಿ ನೆರವು ಬೇಕೆಂದು ಬಹಿರಂಗವಾಗಿ ಮನವಿ ಮಾಡಿದ್ದರು.

ರಾಜ್ಯದಲ್ಲಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಮಳೆಯಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಆಸ್ತಿಪಾಸ್ತಿ ಕಳೆದುಕೊಂಡಿದ್ದರು. ಅತಿವೃಷ್ಟಿಯಿಂದಾಗಿ 35 ಸಾವಿರ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಪ್ರವಾಹ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಅಕ್ಟೋಬರ್‌ನಲ್ಲಿ 1,200 ಕೋಟಿ ಬಿಡುಗಡೆ ಮಾಡಿತ್ತು. ಎರಡನೆಯ ಹಂತದ ಪರಿಹಾರದಿಂದ ರಾಜ್ಯಕ್ಕೆ ಒಟ್ಟು 3,069.85 ಕೋಟಿ ಪರಿಹಾರ ದೊರೆತಂತಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top