fbpx
ಸಮಾಚಾರ

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ: ರಾಕ್ಷಸರ ಸಂಹಾರಕ್ಕೆ ದಿನಾಂಕ ಫಿಕ್ಸ್!

ನಿರ್ಭಯಾ ಅತ್ಯಾಚಾರಿಗಳನ್ನು ಜ.22ಕ್ಕೆ ಗಲ್ಲಿಗೇರಿಸುವಂತೆ ಪಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿದೆ.ಜ.22ರಂದು ಬೆಳಗ್ಗೆ 7 ಗಂಟೆಗೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕೋರ್ಟ್ ಆದೇಶಿಸಿದೆ. ಈ ಮೂಲಕ 7 ವರ್ಷಗಳ ಬಳಿಕ ನಿರ್ಭಯಾ ಅತ್ಯಾಚಾರಿಗಳನ್ನು ನೇಣಿಗೇರಿಸಲಾಗುತ್ತಿದೆ.

ನ್ಯಾ. ಸತೀಶ್‌ ಕುಮಾರ್‌ ಅರೋರಾ ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಅಪರಾಧಿಗಳು ಈ ತೀರ್ಪಿನ ವಿರುದ್ಧ 14 ದಿನಗಳೊಳಗೆ ಕಾನೂನಿನ ಮೊರೆ ಹೋಗಬಹುದು ಎಂದೂ ದಿಲ್ಲಿಯ ಪಟಿಯಾಲಾ ಹೌಸ್‌ ಕೋರ್ಟ್ ತಿಳಿಸಿದೆ.

ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ ನಿರ್ಭಯಾ ತಾಯಿ ಆಶಾ ದೇವಿ, ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿರುವುದರಿಂದ ತನ್ನ ಮಗಳಿಗೆ ನ್ಯಾಯ ಸಿಕ್ಕಂತಾಗಿದೆ ಎಂದರು. ನಾಲ್ವರು ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದು ದೇಶದ ಮಹಿಳೆಯರಿಗೆ ಅಧಿಕಾರ ನೀಡಿದಂತಾಗಿದೆ. ಈ ನಿರ್ಧಾರದಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಬಲಪಡಿಸುತ್ತದೆ ಎಂದೂ ನಿರ್ಭಯಾ ತಾಯಿ ಅಭಿಪ್ರಾಯ ಪಟ್ಟಿದ್ದಾರೆ.

2012ರ ಡಿಸೆಂಬರ್ 16 ರಂದು 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಖಾಸಗಿ ಬಸ್​ನಲ್ಲಿ ತೆರಳುತ್ತಿದ್ದಾಗ 6 ಮಂದಿ ಹಂತಕರು ಚಲಿಸುವ ಬಸ್​ನಲ್ಲಿಯೆ ಅಮಾನುಷವಾಗಿ ಅತ್ಯಾಚಾರವೆಸಗಿ ರಸ್ತೆಯಲ್ಲಿ ಎಸೆದಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.

ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದು ಬರೋಬ್ಬರಿ 2585 ದಿನಗಳ ಬಳಿಕ ನಿರ್ಭಯಾಳಿಗೆ ನ್ಯಾಯ ದೊರಕಿದ್ದು, ಇಂತಹ ರಾಕ್ಷಸೀ ಕೃತ್ಯವನ್ನು ನಡೆಸುವವರಿಗೆ ಸಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂಬ ಸಂದೇಶವನ್ನು ನ್ಯಾಯಾಲಯ ರವಾನಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top