fbpx
ಸಮಾಚಾರ

ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ ಜಾಮೀನು ಮಂಜೂರು

ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗೆ ಇಂದು ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಸುಮಾರು 105 ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದ ಕೇಂದ್ರದ ಮಾಜಿ ಸಚಿವರಿಗೆ ಇಂದು ಬಿಡುಗಡೆಯ ಭಾಗ್ಯ ದೊರೆತಿದೆ.

ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠದಿಂದ ಜಾಮೀನು ಮಂಜೂರಾಗಿದ್ದು, 105 ದಿನಗಳ ಜಾಮೀನು ನೀಡಿದೆ. ಜೊತೆಗೆ 2 ಲಕ್ಷ ಬಾಂಡ್ ಮತ್ತು ಇಬ್ಬರು ವ್ಯಕ್ತಿಗಳ ಶೂರಿಟಿಯನ್ನು ನೀಡಲು ಕೋರ್ಟ್ ಷರತ್ತು ವಿಧಿಸಿದೆ. ಮಾತ್ರವಲ್ಲ ಚಿದಂಬರಂ ತನ್ನ ಪಾಸ್ ಪೋರ್ಟ್ ಅನ್ನು ಕೋರ್ಟ್ ಗೆ ಒಪ್ಪಿಸಲು ಹೇಳಿದ್ದು ವಿದೇಶ ಪ್ರಯಾಣ ಮಾಡಬಾರದು , ಯಾರಿಗೂ ಸಂದರ್ಶನ ನೀಡಬಾರದು ಮತ್ತು ಸಾರ್ವಜನಿಕ ಹೇಳಿಕೆ ಕೊಡುವಂತಿಲ್ಲ ಎಂದು ಹೇಳಿದೆ.

ನವೆಂಬರ್ 15ರಂದು ಪ್ರಕರಣ ಸಂಬಂಧ ಅರ್ಜಿ ವಿಚಾರಣೆ ನಡೆಸಿ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಐಎನ್ ಎಕ್ಸ್ ಪ್ರಕರಣದಲ್ಲಿ ಚಿದಂಬರಂ ಅವರದ್ದು ಪ್ರಮುಖ ಪಾತ್ರವಿದ್ದು, ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಇಂದು ಚಿದಂಬರಂ ಜಾಮೀನು ಅರ್ಜಿಯ ಅಂತಿಮ ತೀರ್ಪು ಹೊರಬಿದ್ದಿದ್ದು, ಮಾಜಿ ಸಚಿವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಏನಿದು ಆರೋಪ:
2007ರಲ್ಲಿ ಚಿದಂಬರಂ ಕೇಂದ್ರ ವಿತ್ತ ಸಚಿವರಾಗಿದ್ದಾಗ ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ ವಿದೇಶಿ ಬಂಡವಾಳ ಹೂಡಿಕೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕ ಮಂಡಳಿ (ಎಫ್ಐಪಿಬಿ)ಯ ಒಪ್ಪಿಗೆ ಸಿಕ್ಕಿತ್ತು. ಇದನ್ನು ಮಗನ ಶಿಫಾರಸಿನ ಮೇಲೆ ಚಿದಂಬರಂ ದೊರಕಿಸಿಕೊಟ್ಟಿದ್ದರೆಂಬ ಆರೋಪವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top