fbpx
ಸಮಾಚಾರ

“ನ.1ರಿಂದ ಕನ್ನಡ ನಾಮಫಲಕ ಕಡ್ಡಾಯ, ಇಲ್ಲದಿದ್ದರೆ ಲೈಸನ್ಸ್ ಕ್ಯಾನ್ಸಲ್” ಮೇಯರ್ ಗೌತಮ್ ಕುಮಾರ್ ಆದೇಶ.

ಅಂಗಡಿ ಮತ್ತಿತರ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಬಳಸುವುದನ್ನು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದ್ರೆ ಈ ನಿಯಮವನ್ನು ಬಹುತೇಕ ಅಂಗಡಿಗಳ ಮಾಲೀಕರು ಪಾಲಿಸುತ್ತಿರಲಿಲ್ಲ. ಈಗ ವ್ಯಾಪಾರ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ನೂತನ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಕನ್ನಡಿಗೇತರರನ್ನು ಮೇಯರ್ ಮಾಡಲಾಗಿದೆ ಎಂದು ಜರಿದಿದ್ದವರಿಗೆ ನೂತನ ಮೇಯರ್ ಗೌತಮ್ ಕುಮಾರ್ ಜೈನ್ ಪ್ರಬಲ ಸಂದೇಶ ರವಾನಿಸಿದ್ದಾರೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಗಡಿ ಮತ್ತಿತರ ವಾಣಿಜ್ಯ ಮಳಿಗೆಗಳು ಕನ್ನಡದಲ್ಲಿ ಫಲಕಗಳಿದ್ದರೆ ಮಾತ್ರ ಉದ್ಯಮಗಳಿಗೆ ಪರವಾನಗಿ ನೀಡುವುದಾಗಿ ಗೌತಮ್ ಕುಮಾರ್ ಜೈನ್ ಹೇಳಿದ್ದಾರೆ,..

ಹೊಸ ಮಳಿಗೆ ಟ್ರೇಡ್ ಲೈಸೆನ್ಸ್ ಅಪ್ಲೈ ಮಾಡಲು ಕನ್ನಡದಲ್ಲೇ ಅರ್ಜಿ ತುಂಬಬೇಕು. ಕನ್ನಡದಲ್ಲಿ ನಾಮಫಲಕ ಹಾಕದಿದ್ರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು ಖಡಕ್ ಆಗಿ ತಿಳಿಸಲಾಗಿದೆ. ಆಯುಕ್ತರ ಜೊತೆ ಚರ್ಚೆ ಮಾಡಿ ಮೇಯರ್ ಈ ಆದೇಶ ಹೊರಡಿಸಲಿದ್ದಾರೆ. ಆದೇಶ ಪಾಲನೆ ಮಾಡದಿರುವವರ ಪರವಾನಿಗೆಯನ್ನು ರದ್ದು ಮಾಡಲಾಗುತ್ತದೆ.

ನಗರದ ಪ್ರತಿಯೊಂದು ವಾಣಿಜ್ಯ ಮಳಿಗೆಗಳು, ಸಂಘ ಸಂಸ್ಥೆಗಳು, ಕಂಪನಿಗಳು, ಅಂಗಡಿ ಮುಂಗಟ್ಟುಗಳ ಮೇಲೆ ದೊಡ್ಡ ಅಕ್ಷರಗಳಲ್ಲಿ ಕನ್ನಡ ನಾಮಫಲಕ ಹಾಕಿಸಬೇಕು. ಕನ್ನಡ ಅಕ್ಷರಗಳು ಶೇಕಡಾ 70ರಷ್ಟು ದೊಡ್ಡದಾಗಿದ್ದರೆ, ಇಂಗ್ಲಿಷ್ ಅಕ್ಷರ ಶೇಕಡಾ 30ರಷ್ಟಿರುವ ನಾಮಫಲಕ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಕನ್ನಡ ನಾಮಫಲಕ ಅಳವಡಿಸದ ಮಳಿಗೆಗಳಿಗೆ ಟ್ರೇಡ್ ಲೈಸೆನ್ಸ್ ನೀಡದಂತೆ ಅಧಿಕಾರಿಗಳಿಗೆ ಮೇಯರ್ ಕಟ್ಟಪ್ಪಣೆ ಹೊರಡಿಸಿದ್ದಾರೆ.

ಈ ಹಿಂದೆಯೂ 2017 ರಲ್ಲಿ ಸುತ್ತೋಲೆ ಹೊರಡಿಸಿದ್ದ ಬಿಬಿಎಂಪಿ ನಾಮಫಲಕದಲ್ಲಿ ಶೇಕಡಾ 60 ರಷ್ಟು ಜಾಗವನ್ನು ಮೀಸಲಿರಿಸಬೇಕೆಂದು ತಿಳಿಸಿತ್ತು. ಆದರೆ ಕೆಲ ಅಂಗಡಿಗಳು ಇದನ್ನು ಪ್ರಶ್ನಿಸಿ ಕೋರ್ಟ್‌ಮೆಟ್ಟಿಲೇರಿದ್ದರು. ಆಗ ಸಂಸದ ಜಿಸಿ ಚಂದ್ರಶೇಖರ್ ಸೇರಿದಂತೆ ಅನೇಕರು ಕಡ್ಡಾಯ ಕನ್ನಡ ನಾಮಫಲಕಕ್ಕೆ ಒತ್ತಾಯಿಸಿದ್ದರು. ಆದರೆ ಇದೀಗ ಮತ್ತೆ ಬಿಬಿಎಂಪಿ ನೂತನ‌ ಮೇಯರ್ ಕಡ್ಡಾಯ ಕನ್ನಡ ಅಭಿಯಾನಕ್ಕೆ ಮುನ್ನುಡಿ ಬರೆಯಲು ಮುಂದಾಗಿದ್ದು ಇದಕ್ಕೆ ಅಂಗಡಿಕಾರರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top