fbpx
ಸಮಾಚಾರ

“ಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರು” ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿವಾದಾತ್ಮಕ ಹೇಳಿಕೆ

ಬ್ರಾಹ್ಮಣ ಸಮುದಾಯ ಹುಟ್ಟಿನಿಂದಲೇ ಶ್ರೇಷ್ಠ ಸಮುದಾಯವಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಮಾವೇಶವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ತ್ಯಾಗ, ಶ್ರಮ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಈ ಸ್ಥಾನ ಪಡೆದುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನದ ಕೋಟಾದಲ್ಲಿ ಭಾನುವಾರ ನಡೆದ ಅಖಿಲ ಬ್ರಾಹ್ಮಣ ಮಹಾಸಭಾ ಸಭೆಯಲ್ಲಿ ಮಾತನಾಡಿದ ಓಂ ಬಿರ್ಲಾ, ಬ್ರಾಹ್ಮಣ ಸಮುದಾಯ ಯಾವಾಗಲೂ ಇತರ ಸಮುದಾಯದವರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಿಕೊಂಡು ಬಂದಿದೆ. ಈ ಸಮುದಾಯವು ದೇಶದಲ್ಲಿ ಮಾರ್ಗದರ್ಶಕ ಪಾತ್ರವನ್ನು ನಿರ್ವಹಿಸಿದೆ. ಶಿಕ್ಷಣ ಪ್ರಸಾರ ಮತ್ತು ಸಮಾಜದ ಮೌಲ್ಯಗಳನ್ನು ತಿಳಿಸುವಲ್ಲಿ ಬ್ರಾಹ್ಮಣರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಒಂದು ವೇಳೆ ಹಳ್ಳಿಯೊಂದರಲ್ಲಿ ಒಂದೇ ಒಂದು ಬ್ರಾಹ್ಮಣ ಕುಟುಂಬವಿದ್ದರೆ ಆ ಕುಟುಂಬದ ಸೇವೆ ಮತ್ತು ಸಮರ್ಪಣೆಯಿಂದಾಗಿ ಅವರು ಆ ಗ್ರಾಮದಲ್ಲಿ ಉನ್ನತ ಸ್ಥಾನವನ್ನು ಹೊಂದಿರುತ್ತಾರೆ. ಆದ್ದರಿಂದ ಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರಾಗಿರುತ್ತಾರೆ ಎಂದು ಹೇಳಿದರು.

ಅವರ ಹೇಳಿಕೆಯನ್ನುಹಲವು ನೆಟ್ಟಿಗರು ಖಂಡಿಸಿದ್ದಾರೆ. ಅವರು ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಗೌರವ ನೀಡಬೇಕು ಎಂದು ಕೆಲವರು ಹೇಳಿದ್ದಾರೆ. ಒಂದು ಸಮುದಾಯ ಶ್ರೇಷ್ಠ ಎಂದು ಹೇಳುವುದು ಅಥವಾ ಒಂದು ಸಮುದಾಯಕ್ಕಿಂತ ಮತ್ತೊಂದು ಸಮುದಾಯ ಮುಖ್ಯ ಎಂದು ಹೇಳುವುದು ಸಂವಿಧಾನದ 14ನೇ ವಿಧಿ ವಿರುದ್ಧವಾಗಿದೆ. ಇಂತಹ ಹೇಳಿಕೆ ಜಾತಿಗಳ ನಡುವೆ ಕೀಳರಿಮೆಯನ್ನು ಹುಟ್ಟುಹಾಕುವುದರ ಜೊತೆಗೆ ಜಾತಿವಾದವನ್ನು ಉತ್ತೇಜಿಸುತ್ತದೆ ಎಂದು ಖಂಡನೆ ವ್ಯಕ್ತಪಡಿಸಿರುವ ರಾಜಸ್ಥಾನದ ಪಿಯುಸಿಎಲ್​ನ ಅಧ್ಯಕ್ಷರಾದ ಕವಿತಾ ಶ್ರೀವಾಸ್ತವ್​​, ಪಿಯುಸಿಎಲ್​ನಿಂದ ಬಿರ್ಲಾ ವಿರುದ್ಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top