fbpx
ಸಮಾಚಾರ

ಅಪರಿಚಿತ ವ್ಯಕ್ತಿಯಿಂದ ನಟ ಕೋಮಲ್​ ಮೇಲೆ ಹಲ್ಲೆ- ಘಟನೆ ಬಗ್ಗೆ ವಿವರಿಸಿದ ಕೋಮಲ್

ನಟ ಕೋಮಲ್ ಮೇಲೆ ನಾಲ್ಕು ಜನ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್​​​ ಬಳಿ ನಡೆದಿದೆ. ಮಗಳನ್ನು ಟ್ಯೂಶನ್​ ಕ್ಲಾಸ್​ಗೆ ಬಿಟ್ಟು ಬರುತ್ತಿರುವ ವೇಳೆ ಈ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಸದ್ಯ ಕೋಮಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಲ್ಲೆ ಮಾಡಿರುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಗಲಾಟೆಯಲ್ಲಿ ಕೋಮಲ್ ಅವರ ಮುಖ ಹಾಗೂ ಮೂಗಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಬಗ್ಗೆ ಮಲ್ಲೇಶ್ವರಂ ಠಾಣೆಗೆ ಕೋಮಲ್​ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಮಲ್ “ನನಗೆ ಹಲ್ಲೆ ಮಾಡಿದ ವ್ಯಕ್ತಿ ಯಾರು ಎನ್ನುವುದೇ ಗೊತ್ತಿಲ್ಲ. ಆದರೆ ಏಕಾಏಕಿ ಕಾರು ತಡೆದ ಆತ, ಈ ನಡುವೆ ನಿನ್ನದು ಜಾಸ್ತಿಯಾಗಿದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ. ಆದ್ದರಿಂದ ನಾನು ಕಾರಿನಿಂದ ಇಳಿದೆ. ಕಾರು ಇಳಿಯುತ್ತಿದ್ದಂತೆ ನನ್ನ ಮೇಲೆ ಆತ ಹಲ್ಲೆ ನಡೆಸಿದ. ಆದರೆ ನನ್ನ ಮೇಲೆ ಹಲ್ಲೆ ನಡೆಸುವ ಉದ್ದೇಶ ಏನು ಎನ್ನುವುದು ಗೊತ್ತಿಲ್ಲ” ಎಂದು ಹೇಳಿದರು.

ಕೋಮಲ್ ಮೇಲೆ ಹಲ್ಲೆ ನಡೆದ ಬಗ್ಗೆ ಮಾಹಿತಿ ಪಡೆದ ನಟ ಜಗ್ಗೇಶ್ ಅವರು ಕೂಡ ಪೊಲೀಸ್ ಠಾಣೆಗೆ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೋಮಲ್ ಅವರು ಗಾಯಗೊಂಡಿರುವುದರಿಂದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಆ ಬಳಿಕ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಘಟನೆ ನಿಖರ ಕಾರಣ ತಿಳಿದು ಬಂದಿಲ್ಲ, ಪೊಲೀಸರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

ಸದ್ಯ ಲಭ್ಯವಿರುವ ಮಾಹಿತಿ ಅನ್ವಯ ಕೋಮಲ್ ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಜಕ್ಕರಾಯನ ಕೆರೆಯ ನಿವಾಸಿ ವಿಜಯ್ ಅಲಿಯಾಸ್ ವಿಜಿ ಎಂದು ಗುರುತಿಸಲಾಗಿದೆ. ಈತ ತನ್ನ ಭಾವಿ ಪತ್ನಿಯೊಂದಿಗೆ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬಂದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಕೋಮಲ್ ಅವರ ಕಾರು ನನ್ನ ಬೈಕಿಗೆ ತಾಗಿದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾಗಿ ವಿಜಯ್ ಪೊಲೀಸರ ಮುಂದೇ ಹೇಳಿಕೆ ನೀಡಿದ್ದಾನೆ ಎಂಬ ಮಾಹಿತಿ ಲಭಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top