fbpx
ಸಮಾಚಾರ

ಪ್ರವಾಹ ಸಂತ್ರಸ್ತ ಗ್ರಾಮಗಳಿಗೆ ಭೇಟಿ ಕೊಡಲ್ಲವೆಂದ ಅನಂತ್‍ಕುಮಾರ್ ಹೆಗಡೆ- ಗ್ರಾಮಸ್ಥರಿಂದ ಹಿಡಿಶಾಪ!

ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರ ಭೇಟಿಗೆ ಹೋಗಿದ್ದ ಸಂಸದ ಅನಂತಕುಮಾರ್ ಹೆಗಡೆ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಒಪ್ಪದ ಸಂಸದ ಅನಂತ್‍ಕುಮಾರ್ ಹೆಗಡೆ ಅವರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ, ಹಿಡಿ ಶಾಪ ಹಾಕಿದ ಪ್ರಸಂಗ ಇಂದು ಮುಂಡಗೋಡ ತಾಲೂಕಿನ ಕಾತೂರಿನಲ್ಲಿ ನಡೆಯಿತು.

ಚಿಗಳ್ಳಿ ಚೆಕ್ ಡ್ಯಾಂ ಒಡೆದುಹೋದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಮುಂದೆ ಪ್ರತಿಭಟಿಸಲು ಮುಂಡಗೋಡ ತಾಲೂಕಿನ ಕೆಲ ಗ್ರಾಮಸ್ಥರು ಬಂದಿದ್ದರು. ಈ ವೇಳೆ ಸ್ಥಳ ಪರಿಶೀಲನೆಗೆ ಅನಂತ್‍ಕುಮಾರ್ ಹೆಗಡೆ ಬಂದಿದ್ದರು. ಬಂದಿದ್ದ ಸಂಸದರಿಗೆ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಬಂದು ಪರಿಸ್ಥಿತಿ ನೋಡಿ. ಜಮೀನು, ಮನೆ ಎಲ್ಲವೂ ನೀರು ಪಾಲಾಗಿದೆ. ಬದುಕು ತುಂಬಾ ಕಷ್ಟವಾಗಿದೆ” ಎಂದು ಮನವಿ ಮಾಡಿಕೊಂಡರು. ಆಗ ಸಂಸದರು ಗ್ರಾಮಕ್ಕೆ ಭೇಟಿ ನೀಡಲು ನಿರಾಕರಿಸಿದರು., ಗ್ರಾಮಕ್ಕೆ ಬರುವುದು ನನ್ನ ಕೆಲಸವಲ್ಲ, ಅಧಿಕಾರಿಗಳು ಕೆಲಸ ಮಾಡುವುದು ಮುಖ್ಯ ಎಂದು ಹೇಳಿದರು.

ಅನಂತ್‍ಕುಮಾರ್ ಹೆಗಡೆ ಅವರ ಮಾತಿನಿಂದ ಕೋಪಗೊಂಡ ಗ್ರಾಮಸ್ಥರು ಸಂಸದರನ್ನು ಮುತ್ತಿಗೆ ಹಾಕಿ, ಏಕವಚನದಲ್ಲೇ ಹಿಡಿ ಶಾಪ ಹಾಕಿದರು. ಚುನಾವಣೆ ಸಮಯದಲ್ಲಿ ಮತ ಕೇಳುವಾಗ ನಾವು ಬೇಡ ಅಂದ್ರೂ ಕಾಲು ಮುಗಿಯುತ್ತಾರೆ. ಮತಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಈಗ ಪ್ರವಾಹದಿಂದ ಜನರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಅಂದ್ರೆ ಗ್ರಾಮಕ್ಕೆ ಬರುವುದು ನನ್ನ ಕೆಲಸ ಅಲ್ಲ ಎನ್ನುತ್ತಾರೆ! ಸಂಸದರಿಗೆ ಅರ್ಥವಾಗೊಲ್ವಾ? ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಕಿಡಿಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top