fbpx
ಸಮಾಚಾರ

4 ಭಾಷೆಗಳಲ್ಲಿಯೂ ತಾವೇ ಡಬ್ಬಿಂಗ್ ಮಾಡಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಸುದೀಪ್.

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಕನ್ನಡವೂ ಸೇರಿ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ಸ್ವತಃ ಕಿಚ್ಚನ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರೇ ಮಾಮೂಲಿ ಪ್ರೇಕ್ಷಕರಲ್ಲೂ ವಿಭಿನ್ನ ಕ್ರೇಜ್ ಹುಟ್ಟುಹಾಕುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿರುವ ಚಿತ್ರದ ಮೇಕಿಂಗ್ ಸ್ಟಿಲ್ಲುಗಳೇ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಿದೆ.

ವಿಶೇಷ ಅಂದರೆ ಪೈಲ್ವಾನ್ ಚಿತ್ರಕ್ಕೆ ನಾಲ್ಕು ಭಾಷೆಗಳಿಗೂ ಸ್ವತಃ ಸುದೀಪ್ ಅವರೇ ಡಬ್ ಮಾಡಿದ್ದಾರೆ. ಆದರೆ ಮಲಯಾಳಂ ನಲ್ಲಿ ಮಾತ್ರ ಸುದೀಪ್ ಧ್ವನಿ ಕೇಳುವುದಿಲ್ಲ. ಹೌದು, ಸುದೀಪ್ ಗೆ ಮಲಯಾಳಂ ಭಾಷೆಯನ್ನು ಮಾತನಾಡಲು ಬರುವುದಿಲ್ಲ. ಹೀಗಾಗಿ ಸುದೀಪ್ ಮಲಯಾಳಂ ನಲ್ಲಿ ಡಬ್ ಮಾಡಲು ಯತ್ನಿಸಿಲ್ಲ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಮಾತ್ರವೇ ಸುದೀಪ್ ಪೈಲ್ವಾನ್ ಗೆ ಧ್ವನಿ ನೀಡಿದ್ದಾರೆ. ಪೈಲ್ವಾನ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಸ್ವತಃ ಸುದೀಪ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕೆಲದಿನಗಳ ಹಿಂದೆ ಲಹರಿ ಸಂಸ್ಥೆಯು ಅಭಿನಯ ಚಕ್ರವರ್ತಿ ಅಭಿನಯದ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿ ಸದ್ದು ಮಾಡಿತ್ತು. ಇದೀಗ ‘ಪೈಲ್ವಾನ್’​ನ ಗಾನ ಬಜಾನಗೆ ವೇದಿಕೆ ಸಿದ್ದಪಡಿಸಲು ಚಿತ್ರತಂಡ ಮುಂದಾಗಿದೆ. ಚಿತ್ರದ ಹಾಡುಗಳನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲು ಕೃಷ್ಣ ಅ್ಯಂಡ್ ಟೀಂ ಪ್ಲ್ಯಾನ್​ ಮಾಡಿಕೊಂಡಿದೆಯಂತೆ. ಅಂದರೆ ಜುಲೈ 27 ರಂದು ‘ಪೈಲ್ವಾನ್’​ನ ಹಾಡುಗಳು ಲೋಕಾಪರ್ಣೆ ಆಗಲಿದೆ.

ಚಿತ್ರದುರ್ಗದಲ್ಲಿ “ಪೈಲ್ವಾನ್‌’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಇಷ್ಟು ದಿನ “ಪೈಲ್ವಾನ್‌’ ಚಿತ್ರದ ಹಾಡುಗಳು ಹೇಗಿರಲಿವೆ ಎಂಬ ಪ್ರಶ್ನೆಗೆ ಜುಲೈ 27 ರಂದು ಉತ್ತರ ಸಿಗಲಿದೆ. ಆಡಿಯೋ ಸಮಾರಂಭಕ್ಕೂ ಮುನ್ನವೇ ಒಂದೊಂದರಂತೆ ವಾರಕ್ಕೊಂದು ಹಾಡನ್ನು ಚಿತ್ರತಂಡ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಿದೆ.

ಪೈಲ್ವಾನ್ ಬಗ್ಗೆ:
ಪೈಲ್ವಾನ್ ಚಿತ್ರದ ಬಗ್ಗೆ ಹೇಳಬೇಕೆಂದರೆ ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ಸುದೀಪ್’ಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರುಣ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. RRR ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣಾ ಅವರ ಪತ್ನಿ ಸ್ವಪ್ನ ಕೃಷ್ಣಾ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಕರುಣಾಕರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top