fbpx
ಸಮಾಚಾರ

ಫೈನಲ್ ಪಂದ್ಯ ಗೆಲ್ಲದಿದ್ದರೂ ಟ್ರೋಫಿ ಎತ್ತಿ ಹಿಡಿದ ಇಂಗ್ಲೆಂಡ್.

ವಿಶ್ವಕಪ್ ಇತಿಹಾಸದಲ್ಲೇ ಅತ್ಯದ್ಭುತ ಫೈನಲ್ ಮೂಲಕ ಕ್ರಿಕೆಟ್ ಜನಕ ಇಂಗ್ಲೆಂಡ್ ಚೊಚ್ಚಲ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಣ ಏಕದಿನ ವಿಶ್ವಕಪ್ ಫೈನಲ್ ಪಂದ್ಯವು ರೋಚಕ ಟೈ ಫಲಿತಾಂಶದಲ್ಲಿ ಅಂತ್ಯಕಂಡಿದೆ. ಇದರಂತೆ ಅತಿ ಹೆಚ್ಚು ಬೌಂಡರಿ (ಬೌಂಡರಿ ಹಾಗೂ ಸಿಕ್ಸರ್) ಗಳಿಸಿದ ತಂಡವೆಂಬ ಕಾರಣಕ್ಕಾಗಿ ಚೊಚ್ಚಲ ವಿಶ್ವಕಪ್‌ ಕಿರೀಟಕ್ಕೆ ಮುತ್ತಿಕ್ಕಿದೆ.

ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಗೊಂದಲದಲ್ಲಿಯೇ ಬ್ಯಾಟಿಂಗ್ ಆಯ್ದುಕೊಂಡರು. ತೀರಾ ಪ್ರಮುಖ ಪಂದ್ಯದಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾದ ನ್ಯೂಜಿಲೆಂಡ್ 8 ವಿಕೆಟ್​ಗೆ 241 ರನ್ ಬಾರಿಸಿದರೆ, ಪ್ರತಿಯಾಗಿ ಇಂಗ್ಲೆಂಡ್ 50 ಓವರ್​ಗಳಲ್ಲಿ 241 ರನ್​ಗೆ ಆಲೌಟ್ ಆಗಿತ್ತು. ಈ ಮೂಲಕ ಪಂದ್ಯ ಟೈ ಆಗಿ ಫಲಿತಾಂಶಕ್ಕೆ ಮೊದಲ ಬಾರಿಗೆ ಸೂಪರ್ ಓವರ್ ಮೊರೆ ಹೋಗಲಾಯಿತು.

ಸೂಪರ್ ಓವರ್‍‌ನಲ್ಲಿ ಇಂಗ್ಲೆಂಡ್ 15 ರನ್ ಸಿಡಿಸಿತು. ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಅಬ್ಬರಿಸಿದರು. 2 ಬೌಂಡರಿ ನೆರವಿನಿಂದ ನ್ಯೂಜಿಲೆಂಡ್‌ಗೆ 16 ರನ್ ಟಾರ್ಗೆಟ್ ನೀಡಲಾಯಿತು. ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್ ಹಾಗೂ ಜೇಮ್ಸ್ ನೀಶಮ್ ರನ್ ಚೇಸ್ ಮಾಡಲು ಕಣಕ್ಕಿಳಿದರು. ಜೇಮ್ಸ್ ನೀಶನ್ ಭರ್ಜರಿ ಸಿಕ್ಸರ್ ಪಂದ್ಯಕ್ಕೆ ರೋಚಕ ತಿರುವು ನೀಡಿತು. ಆದರೆ ಅಂತಿಮ 1 ಎಸೆತದಲ್ಲಿ 2 ರನ್ ಬೇಕಿತ್ತು. 2ನೇ ರನ್‌ಗೆ ಪ್ರಯತ್ನಿಸಿದ ಗಪ್ಟಿಲ್ ರನೌಟ್‌ಗೆ ಬಲಿಯಾದರು.ಪಂದ್ಯ ಮತ್ತೆ ಟೈಗೊಂಡಿತು. ಆದರೆ ಗರಿಷ್ಠ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತು. ಕ್ರಿಕೆಟ್ ಜನಕರು ಇದೇ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದಿಕೊಂಡಿತು. ಆದರೆ ದಿಟ್ಟ ಹೋರಾಟ ನೀಡಿದರೂ ನ್ಯೂಜಿಲೆಂಡ್‌ಗೆ ಅದೃಷ್ಠ ಕೈಹಿಡಿಯಲಿಲ್ಲ. ಸತತ 2ನೇ ಬಾರಿ ನ್ಯೂಜಿಲೆಂಡ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಟೈ ಆದರೆ ಸೂಪರ್ ಓವರ್ ನಿಯಮ ಹೇಗೆ?
ಐಸಿಸಿ ನಿಯಮದನ್ವಯ ಸೂಪರ್ ಓವರ್ ಟೈನಲ್ಲಿ ಅಂತ್ಯ ಕಂಡರೆ ಅತಿ ಹೆಚ್ಚು ಬೌಂಡರಿಗಳನ್ನೂ ಗಳಿಸಿದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ. ಇಲ್ಲಿ 50 ಓವರ್‌ಗಳ ಇನ್ನಿಂಗ್ಸ್ ಹಾಗೂ ಸೂಪರ್ ಓವರ್‌ನಲ್ಲಿ ಅತಿ ಹೆಚ್ಚು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top