fbpx
ಸಮಾಚಾರ

“ಸರ್ಕಾರ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು” ದೋಸ್ತಿಗೆ ರಾಜ್ಯಪಾಲ ವಿ.ಆರ್.ವಾಲಾ ಚಾಟಿ

ಅಳಿವು-ಉಳಿವಿನ ಅಂಚಿನಲ್ಲಿ ಹೋರಾಡುತ್ತಿರುವ ಮೈತ್ರಿ ಸರ್ಕಾರಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಚಾಟಿ ಬೀಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿದ್ದಾರೆ. ಸರ್ಕಾರ ಯಾವುದೇ ಆಡಳಿತಾತ್ಮಕ ತೀರ್ಮಾನವನ್ನು ಕೈಗೊಳ್ಳುವಂತಿಲ್ಲ ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ.

ಸರ್ಕಾರ ಪತನದ ಮುನ್ಸೂಚನೆ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ಕಡತಗಳಿಗೆ ಸಹಿ ಮತ್ತು ಅಧಿಕಾರಿಗಳಿಗೆ ಭಡ್ತಿ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲರು ಈ ಆದೇಶವನ್ನು ಹೊರಡಿಸಿದ್ದಾರೆ.

16 ಶಾಸಕರ ರಾಜೀನಾಮೆಯಿಂದಾಗಿ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಹುಮತವನ್ನು ಕಳೆದುಕೊಂಡಿದೆ. ಆದ್ದರಿಂದ, ಸರ್ಕಾರ ಯಾವುದೇ ಆಡಳಿತಾತ್ಮಕ ತೀರ್ಮಾನವನ್ನು ಕೈಗೊಳ್ಳಬಾರದು ಎಂದು ರಾಜ್ಯಪಾಲರು ಸೂಚನೆ ಕೊಟ್ಟಿದ್ದಾರೆ.

ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಎಂದು ಅಧಿಕಾರಿಗಳಿಗೆ ಬಡ್ತಿ ನೀಡಿರುವ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top