fbpx
ಸಮಾಚಾರ

ಸ್ಪೀಕರ್‌ ರಮೇಶ್ ಕುಮಾರ್ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಅತೃಪ್ತ ಶಾಸಕರು.

ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ತಿರಸ್ಕರಿಸಿದ ಹಿನ್ನಲೆಯಲ್ಲಿ 8 ಮಂದಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದಾರೆ.

ಇಂದು ಬೆಳಗ್ಗೆ ಮುಂಬೈನಲ್ಲಿರುವ 10 ಶಾಸಕರು ಅರ್ಜಿಯನ್ನು ಸಲ್ಲಿಸಿದ್ದಾರೆ. ಶನಿವಾರ ನಾವು ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದೇವೆ. ಆದರೆ ಇಲ್ಲಿಯವರೆಗೂ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಸ್ಪೀಕರ್ ಅವರಿಗೆ ಸೂಚನೆ ನೀಡಬೇಕೆಂದು 10 ಶಾಸಕರು ಮನವಿ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು, ರಾಜೀನಾಮೆ ಸಲ್ಲಿಸಿದ್ದ 13 ಶಾಸಕರ ಪೈಕಿ 8 ಶಾಸಕರ ರಾಜಿನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ಕೇವಲ ಐವರು ಶಾಸಕರ ರಾಜಿನಾಮೆಗಳು ಕ್ರಮಬದ್ಧವಾಗಿವೆ. ಇವರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೆ ಕ್ರಮಬದ್ಧವಲ್ಲದ ರಾಜೀನಾಮೆ ಸಲ್ಲಿಸಿದ ಶಾಸಕರಿಗೆ ಮತ್ತೊಮ್ಮೆ ಖುದ್ಧಾಗಿ ರಾಜೀನಾಮೆ ಸಲ್ಲಿಸಲು ತಿಳಿಸಲಾಗಿದೆ ಎಂದು ಹೇಳಿದ್ದರು.

ಅಷ್ಟೇ ಅಲ್ಲದೆ, ಕಾನೂನುಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದ ಐವರು ಶಾಸಕರ ವಿಚಾರಣೆ ನಡೆಸಲು ಜುಲೈ 12 ಮತ್ತು 15ನೇ ತಾರೀಖಿನಂದು ಸಮಯ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಅತೃಪ್ತ ಶಾಸಕರು, ಕಾನೂನುಬದ್ಧವಾಗಿರುವ ರಾಜೀನಾಮೆ ಅಂಗೀಕಾರ ಮಾಡುವಲ್ಲಿ ಸ್ಪೀಕರ್ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top