fbpx
ಸಮಾಚಾರ

ಕೋಮಾದಲ್ಲಿ ಮೈತ್ರಿ ಸರ್ಕಾರ- ಐಸಿಯೂನಲ್ಲಿ ಇನ್ನೆಷ್ಟು ದಿನ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಕ್ಷಣದಿಂದ ಕ್ಷಣಕ್ಕೆ ಪತನದತ್ತ ಸಾಗುತ್ತಿದ್ದು ವೈದ್ಯಕೀಯ ಭಾಷೆಯಲ್ಲಿ ಹೇಳಬೇಕೆಂದರೆ ಕೋಮಾ ಹಂತ ತಲುಪಿದೆ, ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು ಮಿತ್ರಕೂಟದ ನಾಯಕರು ಕೊನೆಹಂತದ ಪ್ರಯತ್ನವನ್ನು ನಡೆಸಿದ್ದಾರೆ.

ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರ 224. ಸರ್ಕಾರ ರಚಿಸುವ ಮ್ಯಾಜಿಕ್ ನಂಬರ್ 113. ಹೀಗಾಗಿ ಕಳೆದ ವರ್ಷ 118 ಜನ ಮೈತ್ರಿ ಪಕ್ಷದ ಶಾಸಕರು ಒಟ್ಟಾಗಿ ಸರ್ಕಾರ ರಚನೆ ಮಾಡಿದ್ದರು. ಆದರೆ, ಇದೀಗ ಕಾಂಗ್ರೆಸ್ ಪಕ್ಷದ 13 ಹಾಗೂ ಜೆಡಿಎಸ್ ಪಕ್ಷದ ಓರ್ವ ಶಾಸಕ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ ಮೈತ್ರಿಗೆ ಬೆಂಬಲ ಸೂಚಿಸಿದ್ದ ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ಹೆಚ್. ನಾಗೇಶ್ ಸಹ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.

ಈ ಪ್ರಕ್ರಿಯೆಯಿಂದ ಕಾಂಗ್ರೆಸ್-ಜೆಡಿಎಸ್ ಸಂಖ್ಯೆ 118 ರಿಂದ 104ಕ್ಕೆ ಕುಸಿದಿದೆ. ಅಲ್ಲದೆ ಬಿಜೆಪಿ ಸಂಖ್ಯೆ 105 ರಿಂದ 107ಕ್ಕೆ ಏರಿಕೆ ಕಂಡಿದೆ. 14 ಶಾಸಕರ ರಾಜೀನಾಮೆಯಿಂದಾಗಿ ಇದೀಗ ಬಹುಮತದ ಮ್ಯಾಜಿಕ್ ನಂಬರ್ 106 ಕ್ಕೆ ಇಳಿದಿದೆ. ಪರಿಣಾಮ ಬಿಜೆಪಿ ತಾಂತ್ರಿಕವಾಗಿ ಬಹುಮತ ಪಡೆದಂತಾಗಿದೆ. ಇದೇ ಕಾರಣಕ್ಕೆ ಸರ್ಕಾರ ರಚಿಸಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಎಲ್ಲವೂ ಬಿಜೆಪಿ ನಾಯಕರು ಅಂದುಕೊಂಡತೆ ಆದರೆ, ಈ ವಿಧಾನಮಂಡಲ ಅಧಿವೇಶನದ ಒಳಗೆ ಹೊಸ ಸರ್ಕಾರ ರಚನೆಯಾಗುವುದರಲ್ಲಿ ಎರಡು ಮಾತಿಲ್ಲ.

ಏತನ್ಮಧ್ಯೆ, ಸೋಮವಾರ ಮಧ್ಯಾಹ್ನ ರಾಜ್ಯಪಾಲ ವಜುಭಾಯಿ ವಾಲಾ ಅವರು, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ಅವರನ್ನು ಕರೆಸಿಕೊಂಡು ಅರ್ಧತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಮುಂದೆ ಕೈಗೊಳ್ಳಬೇಕಾದ ಕಾನೂನಾತ್ಮಕ ನಡೆಗಳ ಬಗ್ಗೆ ಸಲಹೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಉಂಟಾಗುವ ಸಂವಿಧಾನಿಕ ಬಿಕ್ಕಟ್ಟಿನ ಬಗ್ಗೆ ರಾಜ್ಯಪಾಲರು ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆಯಲ್ಲಿ ಬಿಜೆಪಿ ನಾಯಕರು ಇದ್ದಾರೆ. ಹಾಗಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದು ಯಾವುದೇ ಕ್ಷಣದಲ್ಲೂ ಪತನವಾಗುವ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top