fbpx
ಸಮಾಚಾರ

ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಅಧ್ಯಕ್ಷರಾಗಿ ಕನ್ನಡಿಗ ರಾಹುಲ್ ದ್ರಾವಿಡ್ ನೇಮಕ.

ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಜೂನಿಯರ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಜುಲೈ 1ರಿಂದಲೇ ದ್ರಾವಿಡ್ ಈ ಹುದ್ದೆ ಅಲಂಕರಿಸಬೇಕಾಗಿತ್ತು. ಆದರೆ ಇಂಡಿಯಾ ಸಿಮೆಂಟ್ಸ್ ಉಪಾಧ್ಯಕ್ಷರಾಗಿದ್ದ ದ್ರಾವಿಡ್ ಗೆ ಎರಡು ಹುದ್ದೆಗಳಲ್ಲಿ ಏಕಕಾಲಕ್ಕೆ ಕಾರ್ಯನಿರ್ವಹಿಸುವ ತೊಡಕು ಉಂಟಾಗಿತ್ತು. ಈಗ ಇಂಡಿಯಾ ಸಿಮೆಂಟ್ಸ್ ದ್ರಾವಿಡ್ ಗೆ ಎನ್‌ಸಿಎ ಅಧ್ಯಕ್ಷ ಸ್ಥಾನದ ಅವಧಿ ಮುಗಿಯುವವರೆಗೆ ರಜೆ ನೀಡುವುದಾಗಿ ಹೇಳಿದೆ. ಹಾಗಾಗಿ ದ್ರಾವಿಡ್ ತಾವು ಎನ್‌ಸಿಎ ಅಧ್ಯಕ್ಷ ಹುದ್ದೆಗೇರುವಲ್ಲಿನ ಅಡ್ಡಿ ನಿವಾರಣೆಯಾದಂತಾಗಿದೆ.

ಉದಯೋನ್ಮುಖ ಕ್ರಿಕೆಟಿಗರಿಗೆ ತರಬೇತಿ, ರಾಷ್ಟ್ರೀಯ ಆಟಗಾರರ ಪುನಶ್ಚೇತನ, ಪ್ರತಿಭಾ ಶೋಧ ಮತ್ತು ಗಾಯಾಳು ಕ್ರಿಕೆಟಿಗರ ಚಿಕಿತ್ಸಾ ಘಟಕದ ನಿರ್ವಹಣೆ ಹೊಣೆಗಳನ್ನು ಅವರು ನಿಭಾಯಿಸಲಿದ್ದಾರೆ.

ದ್ರಾವಿಡ್‌ ಇನ್ನು ಮುಂದೆ ಭಾರತ ಕ್ರಿಕೆಟ್‌ನಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಭವಿಷ್ಯದ ಪೀಳಿಗೆಯನ್ನು ರೂಪಿಸುವುದು, ಎನ್‌ಸಿಎ ಹಾಗೂ ವಲಯವಾರು ಕ್ರಿಕೆಟ್‌ ಅಕಾಡೆಮಿಗಳ ತರಬೇತುದಾರರನ್ನು ನೇಮಿಸುವುದು, ಮಹಿಳಾ ತಂಡದ ಅಭಿವೃದ್ಧಿಗೆ ಶ್ರಮಿಸುವುದು, ಗಾಯಗೊಂಡ ಕ್ರಿಕೆಟಿಗರ ಯೋಗಕ್ಷೇಮ ಗಮನಿಸುವುದು ದ್ರಾವಿಡ್‌ ಪಾಲಿಗೆ ಬರಲಿದೆ.

ಎರಡು ವರ್ಷಗಳ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದಾರೆ. ಬಿಸಿಸಿಐ ಆಡಳಿತಾತ್ಮಕ ಸಮಿತಿ ಸಭೆಯಲ್ಲಿ ದ್ರಾವಿಡ್‌ ಅಧಿಕಾರ ವಹಿಸಿಕೊಂಡರು. ಜೂನಿಯರ್‌ ತಂಡದ ಕೋಚ್‌ ಆಗಿ ದ್ರಾವಿಡ್‌ ಮುಂದುವರಿಯಲಿದ್ದಾರೆ.

ಕರ್ನಾಟಕದ ರಾಹುಲ್ ಸದ್ಯ ಭಾರತ ಎ ಮತ್ತು 19 ವರ್ಷದೊಳಗಿನವರ ತಂಡಗಳಿಗೆ ಮುಖ್ಯ ಕೋಚ್ ಆಗಿದ್ದಾರೆ‌.ಗೋಡೆ ಎಂದೇ ಖ್ಯಾತರಾಗಿರುವ ದ್ರಾವಿಡ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25 ಸಾವಿರಕ್ಕೂ ಹೆಚ್ಚು ರನ್‌ಗಳಿಸಿದ ಭಾರತ ಎರಡನೇ ಬ್ಯಾಟ್ಸ್‌ಮನ್‌ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top